ನರೇಂದ್ರ ಮಂಡಲ -
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿತವಾಗಿದ್ದ, ಭಾರತದ ದೇಶೀಯ ಸಂಸ್ಥಾನಧೀಶರ ಪ್ರಾತಿನಿಧಿಕ ಸಂಸ್ಥೆ. ಇದಕ್ಕೆ ಮುಂಚೆ ದೇಶೀಯ ಸಂಸ್ಥಾನಗಳೂ ಬ್ರಿಟಿಷ್ ಸರ್ಕಾರವೂ ರಾಜಕೀಯ ಇಲಾಖೆಯ ಮೂಲಕ ವ್ಯವಹಾರ ಮಾಡುತ್ತಿದ್ದವು. ಈ ವಿಧಾನ ಅಷ್ಟೇನೂ ಸರಳವಾಗಿಯೂ ಸಮರ್ಪಕವಾಗಿಯೂ ಇರಲಿಲ್ಲ. ದೇಶೀಯ ಸಂಸ್ಥಾನಗಳ ರಾಜರಲ್ಲಿ ಒಮ್ಮತ ಇರಲಿಲ್ಲ. ಇದರಿಂದ ಯಾವುದೇ ವಿಷಯವಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲು ಬ್ರಿಟಿಷರಿಗೆ ತೊಂದರೆಯಾಗಿತ್ತು. ದೇಶೀಯ ಸಂಸ್ಥಾನಗಳು ಒಟ್ಟಾಗಿ ಕೂಡಿ, ಒಮ್ಮತ ಅಭಿಪ್ರಾಯ ನೀಡುವಂತೆ ಮಾಡಲು ಅನೇಕ ಸಲಹೆಗಳು ಮುಂದೆ ಬರುತ್ತಿದ್ದುವು. ಸಂವಿಧಾನ ಸುಧಾರಣೆಗಳ ವಿಚಾರವಾಗಿ ನೀಡಲಾದ ಮಾಂಟೆಗ್ಯೂ-ಚೆಮ್ಸ್‍ಫರ್ಡ್ ವರದಿಯಲ್ಲಿ (1918) ಈ ವಿಚಾರವನ್ನೂ ಪ್ರಸ್ತಾಪಿಸಲಾಗಿತ್ತು. ದೇಶೀಯ ಸಂಸ್ಥಾನಗಳ ರಾಜರ ಒಂದು ಪ್ರಾತಿನಿಧಿಕ ಮಂಡಲವನ್ನು ಸ್ಥಾಪಿಸಬೇಕೆಂಬುದು ಅದರ ಶಿಫಾರಸುಗಳಲ್ಲೊಂದು. ಇದನ್ನು ಕಾರ್ಯರೂಪಕ್ಕೆ ತರಲು 1921ರ ಫೆಬ್ರವರಿ 8ರಂದು ರಾಜಘೋಷಣೆಯೊಂದನ್ನು ಹೊರಡಿಸಿ ಇದನ್ನು ಸ್ಥಾಪಿಸಲಾಯಿತು. ಡ್ಯೂಕ್ ಆಫ್ ಕನ್ನಾಟ್ ಇದನ್ನು ಉದ್ಘಾಟಿಸಿದ.

ಬಟ್ಲರ್ ವರದಿಯಂತೆ ಭಾರತದಲ್ಲಿದ್ದ ದೇಶೀಯ ಸಂಸ್ಥಾನಗಳ ಸಂಖ್ಯೆ 562. ಇವುಗಳ ಪೈಕಿ 108 ಸಂಸ್ಥಾನಗಳು ನರೇಂದ್ರ ಮಂಡಲದ ಸದಸ್ಯ ಸಂಸ್ಥಾನಗಳಾಗಿದ್ದುವು. ಇವುಗಳ ಒಟ್ಟು ವಿಸ್ತೀರ್ಣ 13,15,48 ಚ.ಕಿ.ಮೀ. ಇವು ಸೆಲ್ಯೂಟ್ ಸ್ಟೇಟ್ಸ್ ಎನಿಸಿಕೊಂಡಿದ್ದುವು. ಉಳಿದವುಗಳ ಪೈಕಿ 127 ಸಂಸ್ಥಾನಗಳಿಂದ ನರೇಂದ್ರ ಮಂಡಲಕ್ಕೆ 12 ಸದಸ್ಯರನ್ನು ಆರಿಸಲಾಗುತ್ತಿತ್ತು. ಇಂಥ ಸಂಸ್ಥಾನಗಳ ಒಟ್ಟು ವಿಸ್ತೀರ್ಣ 1,71,109 ಚ.ಕಿ.ಮೀ. ಉಳಿದ 327 ಸಂಸ್ಥಾನಗಳು ಮತ್ತು ಜಹಗೀರುಗಳಿಗೆ ನರೇಂದ್ರ ಮಂಡಲದಲ್ಲಿ ಪ್ರಾತಿನಿಧ್ಯ ಇರಲಿಲ್ಲ. ನರೇಂದ್ರ ಮಂಡಲಕ್ಕೆ ವೈಸ್‍ರಾಯ್ ಅಧ್ಯಕ್ಷ. ಮಂಡಲದ ಸದಸ್ಯರಾಗಿದ್ದ ಅರಸರಿಂದ ಪ್ರತಿವರ್ಷವೂ ಚಾನ್ಸಲರನ್ನೂ ಪ್ರೋಚಾನ್ಸಲರನ್ನೂ ಆರಿಸಲಾಗುತ್ತಿತ್ತು. ನರೇಂದ್ರ ಮಂಡಲ ವರ್ಷಕ್ಕೊಮ್ಮೆ ದೆಹಲಿಯ ಕೆಂಪು ಕೋಟೆಯಲ್ಲಿ ಸಭೆ ಸೇರುತ್ತಿತ್ತು. ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಒಂದು ಸ್ಥಾಯೀ ಸಮಿತಿ ಇತ್ತು. ವಾರ್ಷಿಕ ಸಭೆ ವೈಸ್‍ರಾಯನ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು.

ನರೇಂದ್ರಮಂಡಲ ಒಂದು ಸಲಹಾ ಸಮಿತಿಯಾಗಿತ್ತೇ ಹೊರತು ಅದಕ್ಕೆ ಕಾರ್ಯನಿರ್ವಹಣಾಧಿಕಾರ ಇರಲಿಲ್ಲ. ಬ್ರಿಟಿಷ್ ಭಾರತ ಮತ್ತು ದೇಶೀಯ ಸಂಸ್ಥಾನಗಳಿಗೆ ಸಮಾನವಾಗಿದ್ದ ಎಲ್ಲ ವಿಚಾರಗಳಲ್ಲೂ ವೈಸ್‍ರಾಯ್ ಈ ಮಂಡಲಿಯ ಸಲಹೆ ಪಡೆಯಬಹುದಾಗಿತ್ತು. ಸಂಸ್ಥಾನಗಳ ಆಂತರಿಕ ವ್ಯವಹಾರಗಳಲ್ಲಾಗಲಿ ಅವುಗಳ ಅಧೀಶರ ವಿಚಾರದಲ್ಲಾಗಲಿ ನರೇಂದ್ರ ಮಂಡಲ ಪ್ರವೇಶಿಸುವಂತಿರಲಿಲ್ಲ. ನರೇಂದ್ರರ ಅಧಿಕಾರ, ಬ್ರಿಟಿಷ್ ಪ್ರಭುತ್ವದೊಂದಿಗೆ ಅವರ ಸಂಬಂಧ ಮುಂತಾದ ವಿಚಾರಗಳನ್ನು ಅದು ಚರ್ಚಿಸುವಂತಿರಲಿಲ್ಲ. ಬ್ರಿಟಿಷ್ ಭಾರತ ಸರ್ಕಾರದೊಂದಿಗೆ ಸಂಸ್ಥಾನಗಳ ಸಂಪರ್ಕವನ್ನು ಹೆಚ್ಚಿಸುವುದೂ ದೇಶದಲ್ಲಿ ಬೆಳೆಯುತ್ತಿದ್ದ ಹೊಸ ಪ್ರವೃತ್ತಿಗಳ ಅರಿವನ್ನು ಅವರಿಗೆ ಉಂಟುಮಾಡಿಕೊಡುವುದು ನರೇಂದ್ರ ಮಂಡಲದ ಎರಡು ಮುಖ್ಯ ಉದ್ದೇಶಗಳಾಗಿದ್ದುವು.
ರಾಜಕೀಯ ಇಲಾಖೆಯ ಕಾರ್ಯವನ್ನು ಸರಿಯಾದ ರೀತಿಯಲ್ಲಿ ವಿವರಿಸಬೇಕೆಂದು  ಆರಂಭದಿಂದಲೂ ನರೇಂದ್ರ ಮಂಡಲ ಸರ್ಕಾರವನ್ನು ಪದೇ ಪದೇ ಒತ್ತಾಯ ಮಾಡುತ್ತಿತ್ತು. ದೇಶೀಯ ಸಂಸ್ಥಾನಗಳು ಮತ್ತು ಬ್ರಿಟಿಷ್ ಪ್ರಭುತ್ವದ ಮಧ್ಯೆ ಇರಬೇಕಾದ ಸಂಬಂಧವನ್ನು ಖಚಿತಪಡಿಸಬೇಕೆಂದು ಅದರ ಸತತ ಬೇಡಿಕೆಯಾಗಿತ್ತು ಬ್ರಿಟಿಷ್ ಭಾರತದಲ್ಲಿ ನಡೆಯುತ್ತಿದ್ದ ರಾಜಕೀಯ ಚಳವಳಿಯಿಂದ ಕಳವಳಗೊಂಡ ಸಂಸ್ಥಾನಾಧೀಶರು ತಮ್ಮ ಭವಿಷ್ಯದ ಭದ್ರತೆಯ ಬಗ್ಗೆ ಬ್ರಿಟಿಷರಿಂದ ಭರವಸೆ ಪಡೆಯಲು ಆಸಕ್ತಿ ತೋರಿದರು. ಒಂದು ಪಕ್ಷ ಬ್ರಿಟಿಷ್ ಸರ್ಕಾರ ರಾಜಕೀಯಾಧಿಕಾರವನ್ನು ಭಾರತೀಯರಿಗೆ ಹಸ್ತಾಂತರ ಮಾಡುವುದಾದರೆ ತಮ್ಮನ್ನು ಕೇಳಿಯೇ ಮಾಡಬೇಕೆಂಬುದು ಅವರ ಅಪೇಕ್ಷೆ. ಇವಕ್ಕೆಲ್ಲ ಪ್ರತಿಕ್ರಿಯೆಯಾಗಿ ಬ್ರಿಟಿಷ್ ಸರ್ಕಾರ 1927ರಲ್ಲಿ ದೇಶೀಯ ಸಂಸ್ಥಾನಗಳ ವಿಚಾರಣಾ ಸಮಿತಿಯನ್ನು ನೇಮಿಸಿತು. ಇದು ಮುಖ್ಯ ಸಂಸ್ಥಾನಗಳನ್ನು ಸಂದರ್ಶಿಸಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತು. ನರೇಂದ್ರ ಮಂಡಲದ ಪರವಾಗಿಯೂ ವಾದವನ್ನು ಮಂಡಿಸಲಾಯಿತು. ಈ ಸಮಿತಿ ತನ್ನ ವರದಿಯನ್ನು 1929ರಲ್ಲಿ ಪ್ರಕಟಿಸಿತು. ಈ ವರದಿ ನರೇಂದ್ರ ಮಂಡಲದ ಕೋರಿಕೆಯಂತೆ ಇರಲಿಲ್ಲವಾದರೂ ದೇಶೀಯ ಸಂಸ್ಥಾನಗಳ ಆಡಳಿತವನ್ನು ಜನಪ್ರತಿನಿಧಿಗಳಿಗೆ ವರ್ಗಾಯಿಸಬಾರದೆಂದು ಅದು ಶಿಫಾರಸು ಮಾಡಿತು.

1930ರ ಅನಂತರ ಭಾರತ ಒಕ್ಕೂಟದ ಪ್ರಶ್ನೆ ನರೇಂದ್ರ ಮಂಡಲದಲ್ಲಿ ಪ್ರಮುಖ ವಿಷಯವಾಗಿತ್ತು. ಈ ಬಗ್ಗೆ ಅದರ ಸದಸ್ಯರಲ್ಲಿ ಒಮ್ಮತ ಇರಲಿಲ್ಲ. ಕೆಲವು ಸಂಸ್ಥಾನಗಳು ಒಕ್ಕೂಟಕ್ಕೆ ಬೆಂಬಲ ಕೊಟ್ಟವು. ಉಳಿದ ಸಂಸ್ಥಾನಗಳು ಕಾಯ್ದು ನೋಡುವ ನೀತಿಯನ್ನು ಅನುಸರಿಸಿದವು. ನರೇಂದ್ರ ಮಂಡಲ ತನ್ನದೇ ಅದ ಒಂದು ನಿರ್ದಿಷ್ಟ ನೀತಿ ಹೊಂದಿರಲಿಲ್ಲ. 1935ರ ಭಾರತ ಸರ್ಕಾರ ಅಧಿನಿಯಮ ಜಾರಿಗೆ ಬಂದ ಮೇಲೆ ಸಂಸ್ಥಾನಗಳು ಒಕ್ಕೂಟವನ್ನು ಸೇರುವಂತೆ ದೇಶೀಯ ರಾಜರ ಮನವೊಲಿಸಲು ವೈಸ್‍ರಾಯ್ ಮಾಡಿದ ಪ್ರಯತ್ನಗಳು ವಿಫಲವಾದವು. 1939ರಲ್ಲಿ ಆರಂಭವಾದ ಎರಡನೆಯ ಮಹಾಯುದ್ಧದಿಂದಾಗಿ ಈ ಪ್ರಯತ್ನ ಕೊನೆಗೊಂಡಿತು. ಯುದ್ಧಕಾಲದಲ್ಲಿ ನರೇಂದ್ರ ಮಂಡಲದ ನೀತಿ ಬ್ರಿಟಿಷ್ ಪರವಾಗಿತ್ತು. ಭಾರತದ ಭವಿಷ್ಯದ ಬಗ್ಗೆ 1942ರಲ್ಲಿ ಕ್ರಿಪ್ಸ್ ನಿಯೋಗ ನೀಡಿದ ಸಲಹೆಯನ್ನು ನರೇಂದ್ರ ಮಂಡಲ ಒಪ್ಪಲಿಲ್ಲ. ಅನಂತರ 1945ರಲ್ಲಿ ಸಿಮ್ಲಾದಲ್ಲಿ ನಡೆದ ಸಭೆಗೆ ನರೇಂದ್ರ ಮಂಡಲವಾಗಲಿ ದೇಶೀಯ ರಾಜರಾಗಲಿ ಆಹ್ವಾನಿತರಾಗಿರಲಿಲ್ಲ. 1946ರ ಬ್ರಿಟಿಷ್ ಸಂಪುಟ ನಿಯೋಗದ ಸಮಯದಲ್ಲಿ, ಸಂಸ್ಥಾನಧೀಶರು ಒಕ್ಕೂಟವನ್ನು ಸೇರುವರೆಂಬ ಅನುಕೂಲ ಪ್ರತಿಕ್ರಿಯೆಯನ್ನು ನರೇಂದ್ರ ಮಂಡಲ ಪ್ರಕಟಪಡಿಸಿತು. ಒಕ್ಕೂಟವನ್ನು ಸೇರುವ ನಿಯಮಾವಳಿಯನ್ನು ತಯಾರಿಸಲು ಒಂದು ಸಮಿತಿಯನ್ನು ರಚಿಸಲಾಯಿತು. ಆದರೆ ಇದು ಫಲಪ್ರದವಾಗಲಿಲ್ಲ.

ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯವನ್ನು ನೀಡುವುದಾಗಿ 1947ರ ಜೂನ್ 3ರಂದು ಮಾಡಲಾದ ಘೋಷಣೆಗೆ ಅನುಸಾರವಾಗಿ ರಾಜಕೀಯ ಇಲಾಖೆಯನ್ನು ಜುಲೈ 5ರಂದು ರದ್ದುಪಡಿಸಿ ಅದರ ಬದಲು ಸರ್ದಾರ್ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಸಂಸ್ಥಾನಗಳ ಇಲಾಖೆಯನ್ನು ರಚಿಸಲಾಯಿತು. ಅದೇ ತಿಂಗಳು 25ರಂದು ನರೇಂದ್ರ ಮಂಡಲ ವಿಶೇಷ ಸಭೆ ಸೇರಿ ಸಂಧಾನ ಸಮಿತಿಯನ್ನು ರಚಿಸಿ ಒಕ್ಕೂಟವನ್ನು ಸೇರುವ ಬಗ್ಗೆ ಮಾತುಕತೆ ನಡೆಸಲು ಪ್ರಾರಂಭಿಸಿತು. ಈ ಬಗ್ಗೆ ಕರಾರನ್ನು ಸಿದ್ಧಪಡಿಸಿತು. ಈ ಕರಾರಿನ ಪ್ರಕಾರ ಅನೇಕ ದೇಶೀಯ ಸಂಸ್ಥಾನಗಳು ಭಾರತ ಒಕ್ಕೂಟದೊಳಗೆ ವಿಲೀನವಾದವು. ಸಂಸ್ಥಾನಗಳ ಇಲಾಖೆ ಕೆಲವು ಸಂಸ್ಥಾನಗಳೊಂದಿಗೆ ಕರಾರುಗಳನ್ನು ಮಾಡಿಕೊಂಡು ಅವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿತು.

ನರೇಂದ್ರ ಮಂಡಲದ ಕಲಾಪಗಳು ಭಾರತದ ರಾಜಕೀಯ ಘಟನೆಗಳ ಮೇಲೆ ಯಾವ ಪರಿಣಾಮಕಾರಿ ಪ್ರಭಾವವನ್ನೂ ಬೀರಲಿಲ್ಲ. ಇದರ ಸಾಧನೆಗಳು ಅಷ್ಟೇನೂ ಗಮನಾರ್ಹವಾಗಿರಲಿಲ್ಲ. ದೇಶೀಯ ಸಂಸ್ಥಾನಗಳ ರಾಜರೆಲ್ಲರೂ ವರ್ಷಕ್ಕೊಮ್ಮೆ ಒಟ್ಟಿಗೆ ಸೇರಲು ಇದೊಂದು ವ್ಯವಸ್ಥೆಯಾಗಿತ್ತು. ಕಲಾಪಗಳಿಗಿಂತಲೂ ಮಿಗಿಲಾಗಿ ತಮ್ಮ ಐಶ್ವರ್ಯ ಮತ್ತು ಆಡಂಬರದ ಪ್ರದರ್ಶನವೇ ಅನೇಕ ರಾಜರಿಗೆ ಪ್ರಮುಖವಾಗಿತ್ತು. ಹೈದರಾಬಾದ್ ಮತ್ತು ಮೈಸೂರಿನಂಥ ದೊಡ್ಡ ಸಂಸ್ಥಾನಗಳು ಈ ಮಂಡಲದ ಕಲಾಪಗಳಲ್ಲಿ ಎಂದೂ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಇದರ ತೀರ್ಮಾನಗಳು ಬ್ರಿಟಿಷ್ ರಾಜ್ಯಾಡಳಿತದ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಇದು ಸಲಹಾ ಸಮಿತಿಯಾಗಿ ಮಾತ್ರ ಉಳಿದಿತ್ತು. ಇದರಲ್ಲಿ ಭಾಗವಹಿಸುತ್ತಿದ್ದ ರಾಜರಲ್ಲಿ ಅನೇಕರು ಸಮರ್ಥವಾಗಿರಲಿಲ್ಲ. ಸಿದ್ಧಪಡಿಸಿದ ಭಾಷಣಗಳನ್ನು ಅವರು ವೈಭವಯುತವಾಗಿ ಓದುತ್ತಿದ್ದರೇ ವಿನಾ ಯಾವುದೇ ಚರ್ಚೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ತಮ್ಮ ಪ್ರಜೆಗಳ ಹಿತಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಂಡಲದ ಸಭೆಗಳಲ್ಲಿ ಚರ್ಚಿಸುತ್ತಿರಲಿಲ್ಲ. ಅವರು ತಮ್ಮ ವೈಯಕ್ತಿಕ ಕುಂದುಕೊರತೆಗಳ ನಿವಾರಣೆಯಲ್ಲೇ ನಿರತರಾಗಿದ್ದರು. ಮಂಡಲದ ಸದಸ್ಯರಲ್ಲಿ ವೈಯುಕ್ತಿಕ ಭೇದಭಾವಗಳಿದ್ದವು. ಮಂಡಲದ ಸಭೆಗಳಲ್ಲಿ ಅವು ವ್ಯಕ್ತವಾಗುತ್ತಿದ್ದುವು. ದೇಶೀಯ ಸಂಸ್ಥಾನಗಳು ಒಟ್ಟಾಗಿ ಸೇರಿ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವನ್ನು ಇದು ಕಲ್ಪಿಸಿತಾದರೂ ನರೇಂದ್ರರು ಇದರ ಸದುಪಯೋಗ ಪಡೆದುಕೊಳ್ಳಲಿಲ್ಲ.	
	   (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ